ತಂತ್ರಶಾಸ್ತ್ರ

	ಭಾರತೀಯ ತತ್ತ್ವಶಾಸ್ತ್ರದಲ್ಲಿ ಗಣ್ಯಸ್ಥಾನ ಪಡೆದಿರುವ ಒಂದು ವಿಭಾಗ. ತಾಂತ್ರಿಕರು ಶಕ್ತಿಯ ಆರಾಧಕರು. ಕಟ್ಟುನಿಟ್ಟಾದ ಮಂತ್ರೋಚ್ಚಾರಣೆ, ತದನುಗುಣವಾದ ಯಂತ್ರರಚನೆ, ಒಪ್ಪುವ ನೈವೇದ್ಯಾದಿಗಳು-ಇವು ಇವರ ವೈಶಿಷ್ಟ್ಯಗಳು.

	ಭಾರತದ ಪವಿತ್ರ ಸಾಹಿತ್ಯದಲ್ಲಿ ವೇದಕ್ಕೆ ಪ್ರಥಮಸ್ಥಾನ. ಸ್ಮøತಿಗೆ ಎರಡನೆಯ ಸ್ಥಾನ. ಪುರಾಣಕ್ಕೆ ಮೂರನೆಯದು. ನಾಲ್ಕನೆಯ ಸ್ಥಾನ ತಂತ್ರಶಾಸ್ತ್ರದ್ದು. ದಕ್ಷಿಣಾಚಾರದ ತಾಂತ್ರಿಕರು ಇದನ್ನು ಪಂಚಮವೇದವೆಂದು ಹೇಳಿ ಇದಕ್ಕೆ ವೇದಕ್ಕೆ ಸಮಾನವಾದ ಸ್ಥಾನವಿದೆಯೆಂದು ವಾದಿಸಿರುತ್ತಾರೆ. ಇದು ವೇದಕ್ಕಿಂತ ಉತ್ತಮವೆಂದು ವಾಮಾಚಾರಿಗಳ ವಾದ. ವೇದ, ಪುರಾಣಗಳನ್ನು ಅವರು ಸಾಧಾರಣ ಸ್ತ್ರೀಗೂ ತಂತ್ರವನ್ನು ಶ್ರೇಷ್ಠ ಸ್ತ್ರೀಗೂ ಹೋಲಿಸಿ, ಆ ವಿದ್ಯೆಗಳು ಮಧ್ಯಮ ಸ್ತ್ರೀಯಂತೆ ಸಾಧಾರಣರಿಗೂ ವಶಳು. ತಂತ್ರವಾದರೋ ಉತ್ತಮ ಸ್ತ್ರೀಯಂತೆ-ಅತ್ಯಂತ ಶ್ರೇಷ್ಠರಿಗೆ ಮಾತ್ರ ವಶಳು ಎಂದು ಹೇಳಿರುತ್ತಾರೆ. ಆದ್ದರಿಂದ ತಂತ್ರಶಾಸ್ತ್ರವನ್ನು ಕೇವಲ ಹುಟ್ಟನ್ನು ಮಾತ್ರ ಗುರುತಿಸಿ ಬೋಧಿಸತಕ್ಕದ್ದಲ್ಲ. ಅರ್ಹತೆಯನ್ನು ಪರೀಕ್ಷಿಸಿ ಅರ್ಹನೆಂದು ಸ್ಥಿರಪಟ್ಟವನಿಗೆ ಮಾತ್ರ ಗೂಢವಾಗಿ ಬೋಧಿಸತಕ್ಕದ್ದು ಎಂದು ತಿಳಿಸಿರುತ್ತಾರೆ.

	ತಂತ್ರಶಾಸ್ತ್ರ ತುಂಬ ಪ್ರಾಚೀನವಾದದ್ದೆಂದೂ ಅದು ಶ್ರುತಿಸ್ಮøತಿಗಳಿಗಿಂತ ಹಳೆಯದೆಂದೂ ತಾಂತ್ರಿಕರು ಹೇಳುತ್ತಾರೆ. ಆದರೆ ವೇದಗಳಲ್ಲಾಗಲಿ ಸ್ಮøತಿಗಳಲ್ಲಾಗಲಿ ತಂತ್ರದ ಪರವಾಗಿ ಆಗಲಿ ವಿರೋಧವಾಗಿ ಆಗಲಿ ಯಾವ ಹೇಳಿಕೆಯೂ ಇಲ್ಲ. ಪುರಾಣಗಳಲ್ಲಿ ತಂತ್ರದ ವಿವರಗಳಿವೆಯಾದ್ದರಿಂದ, ಪುರಾಣಗಳು ಸುಮಾರು ಏಳನೆಯ ಶತಮಾನದಿಂದ ಈಚಿನವಾದ್ದರಿಂದ ಈಗ ದೊರೆಯುವ ತಂತ್ರಶಾಸ್ತ್ರ ಗ್ರಂಥಗಳು ಬಹುಶಃ ಆರನೆಯ ಶತಮಾನದವೆಂದು ಹೇಳಬಹುದು. ಆ ಗ್ರಂಥಗಳಿಗೆ ಬಹುಶಃ ಅದಕ್ಕಿಂತ ಹಿಂದಿನಿಂದ ನಡೆದುಕೊಂಡು ಬಂದ ಆಗಮಗಳು ಆಧಾರಗಳಾಗಿರಬಹುದು. ಈ ಶೈವಾಗಮ ವೈಷ್ಣವಾಗಮಗಳಂತೆ ತಾಂತ್ರಿಕ ಆಗಮಗಳ ಕಾಲ ಇದೇ ಎಂದು ನಿರ್ದಿಷ್ಟವಾಗಿ ಹೇಳಲಾಗುವುದಿಲ್ಲ. ತಾಂತ್ರಿಕ ಆಗಮಗಳೆಲ್ಲ ವೈದಿಕ ಸಮಾಜಕ್ಕೆ ಹೊರತಾದ ಜನರಲ್ಲಿ ಬಹುಶಃ ವೇದದಷ್ಟೇ ಹಿಂದಿನ ಕಾಲದಿಂದಲೂ ಇದ್ದಿರಬಹುದು. ಅವು ಆರನೆಯ ಶತಮಾನದ ವೇಳೆಗೆ ಪ್ರಬಲಿಸಿ ಗ್ರಂಥರೂಪ ಪಡೆದು ವೈದಿಕ ಸಮಾಜಕ್ಕೂ ಹಬ್ಬಿರಬಹುದು.

ಶಂಕರಾಚಾರ್ಯರು ಅರವತ್ತನಾಲ್ಕು ತಂತ್ರಗ್ರಂಥಗಳನ್ನು ಹೆಸರಿಸಿರುತ್ತಾರೆ. ಅವೆಲ್ಲವೂ ಈಗ ದೊರೆಯದವಾಗಿವೆ. ಆರ್ಥರ್ ಅವೆಲಾನ್ ಅವುಗಳಲ್ಲಿ ಅನೇಕವನ್ನು ಹುಡುಕಿ ಬೆಳಕಿಗೆ ತಂದುದಲ್ಲದೆ ಕೆಲವನ್ನು ಆಂಗ್ಲಭಾಷೆಗೂ ತರ್ಜುಮೆ ಮಾಡಿದ್ದಾನೆ. ಅವುಗಳಲ್ಲಿ ಗಣನೀಯವಾದವು ತಂತ್ರಕೌಮುದಿ, ಶಕ್ತಿಸಂಗಮ, ರುದ್ರಯಾಮಲ, ಕಾಲಿಕಾಕುಲಾರ್ಣವ, ತಂತ್ರತತ್ತ್ವ ಮತ್ತು ಮಹಾನಿರ್ವಾಣ ತಂತ್ರಗಳು. ಇವುಗಳ ಕರ್ತೃ ಬ್ರಹ್ಮ, ವಿಷ್ಣು ಮತ್ತು ಶಿವ-ಈ ಮೂರು ದೇವತೆಗಳ ಅವತಾರವಾದ ದತ್ತಾತ್ರೇಯನೆಂದು ತಂತ್ರಗಳಲ್ಲಿ ತಿಳಿಸಿದೆ. ದತ್ತಾತ್ರೇಯ ಮೂವರು ಮಹಾದೇವತೆಗಳ ಅವತಾರವಾದ್ದರಿಂದ ಅವನು ಬೋಧಿಸಿದ ತಂತ್ರದ ಕೆಲವು ಅಂಶಗಳನ್ನು ಶೈವರೂ ವೈಷ್ಣವರೂ ತಮ್ಮ ಸಾಧನದಲ್ಲಿ ಸೇರಿಸಿಕೊಂಡಿರುತ್ತಾರೆ. ಸಂಧ್ಯಾವಂದನೆಯಲ್ಲಿ ಅದರ ಅಂಶಗಳು ಸೇರಿವೆ. ವೈಷ್ಣವರಿಗಿಂತಲೂ ಶೈವರಲ್ಲೇ ತಾಂತ್ರಿಕರು ವಿಶೇಷವಾಗಿ ಕಂಡುಬರುತ್ತಾರೆ.

ಶಂಕರಾಚಾರ್ಯರ ಕಾಲಕ್ಕಾಗಲೇ ತಾಂತ್ರಿಕ ಸಂಸ್ಕಾರಗಳು ಬಹುಮಟ್ಟಿಗೆ ವೈದಿಕರಲ್ಲೂ ಬೌದ್ಧರಲ್ಲೂ ಹೆಚ್ಚಾಗಿ ಉತ್ತರ ದೇಶಗಳ ಜೈನರಲ್ಲಿ ಸ್ವಲ್ಪಮಟ್ಟಿಗೆ ಹರಡಿತ್ತು. ಬೌದ್ಧಮತ ತಾಂತ್ರಿಕರ ವಾಮಪಂಥದ ಆಚಾರಗಳಿಗೆ ಬಲಿಯಾಗಿ ಅಧೋಗತಿಗೆ ಇಳಿದಿತ್ತು. ವೈದಿಕ ಸಮಾಜದಲ್ಲೂ ವಾಮಾಚಾರ ಪ್ರಚಾರಕ್ಕೆ ಬಂದು ಅದು ಕೂಡ ಕಲುಷಿತವಾಗಿತ್ತು. ಶಂಕರಾಚಾರ್ಯರು ತಾಂತ್ರಿಕರ ಅಶ್ಲೀಲ ಆಚಾರಗಳನ್ನು ಖಂಡಿಸಿ, ವೈದಿಕ ಸಂಪ್ರದಾಯಕ್ಕೆ ಸಂಗತವಾಗುವಂತೆ ಅದನ್ನು ಮಾರ್ಪಡಿಸಿದರು. ಅವರು ಸ್ಥಾಪಿಸಿದ ಆರು ಮತಗಳಲ್ಲಿ ಅದೂ ಒಂದು. 

ಶಂಕರಾಚಾರ್ಯರ ಮನೆತನದಲ್ಲೂ ಪರಿಶುದ್ಧ ತಾಂತ್ರಿಕ ಸಾಧನಗಳು ಬಳಕೆಯಲ್ಲಿದ್ದವೆಂದು ತಿಳಿದುಬರುತ್ತದೆ. ಅವರು ತಾಂತ್ರಿಕ ಪೂಜೆಗಳನ್ನು ಸಾತ್ತ್ವಿಕವಾಗಿ ಪರಿವರ್ತಿಸಿ ಕಂಚಿಯಲ್ಲಿ ಶಕ್ತಿಯ ಸಾತ್ತ್ವಿಕ ಪೂಜೆಯನ್ನು ಏರ್ಪಡಿಸಿದರು. ಕಾಮಾಕ್ಷಿ ದೇವಾಲಯದಲ್ಲಿ ಅವರು ಪ್ರತಿಷ್ಠಾಪಿಸಿದ ಶ್ರೀಚಕ್ರ ಇನ್ನೂ ಇದೆ. ಅವರು ತಮಗೆ ಸಂಗತವಾದ ತಾಂತ್ರಿಕ ತತ್ತ್ವದೃಷ್ಟಿಯಿಂದ ಸೌಂದರ್ಯಲಹರಿಯನ್ನು ರಚಿಸಿದರು. ಅದರ ಮೊದಲನೆಯ ಶ್ಲೋಕ ಅತ್ಯಂತ ಪ್ರಸಿದ್ಧವಾದದ್ದು :
 ಶಿವಃ ಶಕ್ತ್ಯಾ ಯುಕ್ತೋ ಯದಿ ಭವತಿ ಶಕ್ತಃ ಪ್ರಭವಿತುಂ
 ನ ಚೇದೇವಂ ದೇವೋ ನ ಖಲು ಕುಶಲಃ ಸ್ಪಂದಿತುಮಪಿ |
 ಅತಸ್ತ್ವಾಮಾರಾಧ್ಯಾಂ ಹರಿಹರವಿರಿಂಚಾದಿಭಿರಿಪಿ
 ಪ್ರಣಂತುಂ ಸ್ತೋತುಂ ವಾ ಕಥಮಕೃತಪುಣ್ಯಃ ಪ್ರಭವತಿ ||
ಓ ದೇವಿ ! ನಿನ್ನ ಶಕ್ತಿ ಶಿವನಲ್ಲಿ ಸೇರಿದುದರಿಂದ ಮಾತ್ರವೇ ಅವನಿಗೆ ಈ ಸಕಲ ಜಗತ್ತನ್ನೂ ಸೃಷ್ಟಿಸುವ ಶಕ್ತಿಯುಂಟಾದದ್ದು; ಅನ್ಯಥಾ (ನಿನ್ನಿಂದ ಶಕ್ತಿ ಪಡೆಯದೆ) ಅವನು ಅಲುಗಿ ಅಲ್ಲಾಡಲೂ ಆರ. ನೀನು ಹರಿಹರಬ್ರಹ್ಮಾದಿಗಳಿಗೂ ಆರಾಧ್ಯಳಾಗಿದ್ದೀಯೆ. ಇಂಥ ನಿನ್ನನ್ನು ಸ್ತುತಿಸಲೂ ನಮಿಸಲೂ ಸಹ ಪುಣ್ಯವಿರಬೇಕಲ್ಲವೆ !

ತಂತ್ರಶಾಸ್ತ್ರಕ್ಕೆ ವಿಶೇಷ ಪ್ರಾಶಸ್ತ್ಯ ದೊರತದ್ದು ಟಿಬೆಟ್ಟಿನ ಮಹಾಯಾನ ಬೌದ್ಧರಲ್ಲಿ ಕಾಶ್ಮೀರದ ಶೈವರಲ್ಲಿ ಮತ್ತು ದಕ್ಷಿಣದ ಕಾಳಾಮುಖರಲ್ಲಿ. ಮಹಾಯಾನ ತಾಂತ್ರಿಕ ಬೌದ್ಧರು ತಮ್ಮ ಪಥವನ್ನು ವಜ್ರಾಯನವೆಂದು ಕರೆದಿರುತ್ತಾರೆ. ಕಾಶ್ಮೀರಶೈವದಲ್ಲಿ ಶೈವಾಗಮಾಂಶಗಳೂ ವೈದಿಕ ಉಪನಿಷದಂಶಗಳೂ ತಾಂತ್ರಿಕ ಅಂಶಗಳೂ ಸೇರಿದಾಗ ಅದು ತ್ರಿಕಶಾಸ್ತ್ರವಾಗಿ ಮಾರ್ಪಟ್ಟಿತು. ಅಭಿನವಗುಪ್ತ ವೇದಾಗಮಗಳನ್ನು ತಂತ್ರಕ್ಕೆ ಹೊಂದಿಕೆಯಾಗಿ ಮಾಡಿದುದಲ್ಲದೆ ಹರಿಹರಬ್ರಹ್ಮಾದಿಗಳಿಗಿಂತ ಮೇಲಿನದಾದ ಶಕ್ತಿತತ್ತ್ವವೇ, ಕಾಲವೆ ತ್ರಿಕವೆಂದು ತಂತ್ರಾಲೋಕವೆಂಬ ತನ್ನ ಗ್ರಂಥದಲ್ಲಿ ಹೇಳಿರುತ್ತಾನೆ. 

ತಾಂತ್ರಿಕರಲ್ಲಿ ಅನೇಕ ಗುಂಪಿನವರಿರುತ್ತಾರೆ. ಮುಖ್ಯವಾದ ಎರಡು ಗುಂಪಿನವರು ಎಂದರೆ ದಕ್ಷಿಣಾಚಾರಿಗಳು (ಬಲಗೈಯವರು) ಮತ್ತು ವಾಮಾಚಾರಿಗಳು (ಎಡಗೈಯವರು). ಬಲಗೈಯವರ ಪೂಜಾವಿಧಾನಗಳು ಸೌಮ್ಯ ಮತ್ತು ವೈದಿಕ ಆಚಾರಗಳಿಗೆ ಹೊಂದಿಕೆಯಾಗುವಂಥವು. ಅವರ ಸಾಧನವೂ ವೇದಾಂತಿಗಳ, ಮುಖ್ಯವಾಗಿ ಅದ್ವೈತಿಗಳ ಸಾಧನವೇ. ವಾಮಪಂಥದವರ ಆಚಾರಗಳು ವೈದಿಕ ಸಂಪ್ರದಾಯಕ್ಕೆ ವಿರುದ್ಧವಾದುವು. ಮದ್ಯ, ಮಾಂಸ, ಮತ್ಸ್ಯ, ಮುದ್ರಾ ಮತ್ತು ಮೈಥುನವೆಂಬ ಪಂಚ ಮಕಾರಗಳ ಆಚಾರಣೆ ಕಡ್ಡಾಯ. ಇವುಗಳ ಮೂಲಕವಲ್ಲದೆ ಸಿದ್ಧಿ ಇಲ್ಲ. ಮೈಥುನದಲ್ಲೂ ಯಾವ ಭೇದವನ್ನೂ ಎಣಿಸಕೂಡದು. ಏಕೆಂದರೆ ಆ ಭೇದಭಾವ ಅದ್ವೈತ ಸಿದ್ಧಿಗೆ, ಅಂದರೆ ಶಕ್ತಿಯೊಂದಿಗೆ ಐಕ್ಯವಾಗುವುದಕ್ಕೆ ದೊಡ್ಡ ತಡೆ. ಕ್ಲುಪ್ತ ಮತ್ತು ನಿಯೋಜ್ಯ ಸಮಯಗಳಲ್ಲಿ ಮಾತ್ರ ಶಕ್ತಿಯನ್ನು ಧ್ಯಾನಿಸಿ, ಪೂಜಿಸಿ, ಸ್ತುತಿಸಿ, ಅವರ ಮನಸ್ಸು ಪೂಜ್ಯಭಾವನೆಯಿಂದ ತುಂಬಿದಾಗ ಮಾತ್ರ ಈ ಮಕಾರಗಳನ್ನು ಅನುಷ್ಠಿಸಬೇಕಾದದ್ದು. ನೈವೇದ್ಯಮಾಡಿದ ಹೆಸರುಕಾಳನ್ನೂ ಮಾಂಸವನ್ನೂ ಮದ್ಯವನ್ನೂ ಸೇವಿಸಿದ ವಿನಾ ತಾರತಮ್ಯವಿಲ್ಲದೆ ಮೈಥುನವನ್ನು ಅಭ್ಯಾಸಿಸಿದ ವಿನಾ ಅದ್ವೈತಸಿದ್ಧಿ ಇಲ್ಲ. ಅದ್ವೈತಸಿದ್ಧಿ ಇಲ್ಲದವನಿಗೆ ಇಹದಲ್ಲೇ ಮೋಕ್ಷ ಅಂದರೆ ಜೀವನ್ಮುಕ್ತಿ ಇಲ್ಲ. ಇವನ್ನು ಆಚರಿಸದ ದಕ್ಷಿಣಾಚಾರದವರಿಗೆ ಖಂಡಿತ ಮುಕ್ತಿ ಇಲ್ಲವೆಂದೇ ವಾಮಾಚಾರಿಗಳ ದೃಢನಂಬಿಕೆ.

ತಂತ್ರ ತತ್ತ್ವದಲ್ಲಿ ಶಕ್ತಿಯೇ ಪರಮವಾದದ್ದು. ಅದನ್ನು ಸಗುಣವಾಗಿ (ಸಕಲವಾಗಿ) ಉಪಾಸಿಸುವ ತಾಂತ್ರಿಕರೂ ಉಂಟು, ನಿರ್ಗುಣವಾಗಿ (ನಿಷ್ಕಲವಾಗಿ) ಉಪಾಸಿಸುವರೂ ಉಂಟು. ಯೋನಿ ಸೃಷ್ಟ್ಯಾತ್ಮಕ ಪರತತ್ತ್ವದ ಸಂಕೇತ. ಎಲ್ಲ ಸೃಷ್ಟಿಗೂ ಅದೇ ಮೂಲವಾದ್ದರಿಂದ ತಾಂತ್ರಿಕರಲ್ಲಿ ಸ್ತ್ರೀಯರಿಗೆ ಉನ್ನತ ಸ್ಥಾನವಿದೆ. ರಾಮಕೃಷ್ಣ ಪರಮಹಂಸರ ತಾಂತ್ರಿಕ ಸಾಧನೆಗೆ ಗುರುವಾಗಿದ್ದವಳು ಒಬ್ಬ ತಾಂತ್ರಿಕ ಯೋಗಿನಿ. ತಾಂತ್ರಿಕರಲ್ಲಿ ಎಷ್ಟೇ ಭೇದಗಳಿರಲಿ ಎಲ್ಲರೂ ಸ್ತ್ರೀ ರೂಪವಾದ ದೈವದ ಉಪಾಸನೆಯನ್ನೇ ಪರಮ ಉಪಾಸನೆಯಾಗಿ ಭಾವಿಸಿರುತ್ತಾರೆ. ತಾಂತ್ರಿಕರಲ್ಲಿ ತಮಗೇ ವಿಶಿಷ್ಟವಾದ ಮಂತ್ರಗಳಿವೆ. ಓಂ, ಅಂ, ಉಮ್ ಅವರ ಸ್ತೋತ್ರಗಳಲ್ಲಿ ಸೇರಿರುವ ಪವಿತ್ರ ವರ್ಣಗಳು. ಶ್ರೀಚಕ್ರ ಅವರ ಧ್ಯಾನಸಾಧನೆಗೆ ಅತ್ಯಂತ ಮುಖ್ಯವಾದ ಸಂಕೇತ.

ಯಂತ್ರಗಳ ಬಳಕೆಯೂ ಅವರಲ್ಲಿ ವಿಶೇಷವಾಗಿ ಕಂಡುಬರುತ್ತದೆ. ಮೈಸೂರಿನ ಓರಿಯಂಟಲ್ ರಿಸರ್ಚ್ ಇನ್ಸ್‍ಟಿಟ್ಯೂಟಿನವರು ಪ್ರಕಟಿಸಿರುವ ಸೌಂದರ್ಯಲಹರಿ ಗ್ರಂಥದ ಅನುಬಂಧದಲ್ಲಿ ಶ್ರೀಚಕ್ರದ ಮತ್ತು ಇತರ ಯಂತ್ರಗಳ ಚಿತ್ರಗಳಿವೆ. ಆ ಚಕ್ರಗಳ ಮತ್ತು ಮಂತ್ರಗಳ ರೂಪವನ್ನೂ ಧ್ಯಾನಿಸುವ ವಿಧಾನವನ್ನೂ ಅದರಿಂದ ಧ್ಯಾನಿಗೆ ಲಭಿಸಬಹುದಾದ ಫಲವನ್ನೂ ಪ್ರತಿಯೊಂದು ಯಂತ್ರದ ಚಿತ್ರದ ಕೆಳಗೆ ವರ್ಣಿಸಿದೆ. 
(ಜಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ